ಯೊವಾನ್ನ 16

16
1“ನಿಮ್ಮ ವಿಶ್ವಾಸ ಕುಸಿಯದಂತೆ ನೀವು ಎಚ್ಚರಿಕೆ ವಹಿಸಬೇಕೆಂದು ನಾನು ಇದನ್ನೆಲ್ಲಾ ನಿಮಗೆ ಹೇಳಿದ್ದೇನೆ. 2ಜನರು, ನಿಮ್ಮನ್ನು ಪ್ರಾರ್ಥನಾಮಂದಿರದಿಂದ ಬಹಿಷ್ಕರಿಸುವರು, ಅಷ್ಟೇ ಅಲ್ಲ, ನಿಮ್ಮನ್ನು ಕೊಲ್ಲುವವನು ತಾನು ದೇವರಿಗೆ ಬಲಿಕೊಟ್ಟೆನೆಂದು ಭಾವಿಸುವ ಕಾಲವೂ ಬರಲಿದೆ. 3ನನ್ನನ್ನಾಗಲಿ, ಪಿತನನ್ನಾಗಲಿ ಅವರು ಅರಿತಿಲ್ಲದ ಕಾರಣ ನಿಮಗೆ ಹೀಗೆ ಮಾಡುವರು. 4ಅಂಥಕಾಲ ಬಂದಾಗ ಇದನ್ನೆಲ್ಲಾ ಕುರಿತು ನಾನು ನಿಮ್ಮನ್ನು ಮೊದಲೇ ಎಚ್ಚರಿಸಿದ್ದೇನೆಂದು ನೀವು ನೆನಸಿಕೊಳ್ಳುವಂತೆ ಇದನ್ನು ಹೇಳುತ್ತಿದ್ದೇನೆ.
ಪವಿತ್ರಾತ್ಮರ ಆಗಮನ
5“ನಾನು ನಿಮ್ಮ ಸಂಗಡ ಇದ್ದುದರಿಂದ ಇದನ್ನೆಲ್ಲಾ ಮೊದಲೇ ನಿಮಗೆ ತಿಳಿಸಲಿಲ್ಲ. ಈಗಲಾದರೋ ನನ್ನನ್ನು ಕಳುಹಿಸಿದಾತನಲ್ಲಿಗೆ ನಾನು ತೆರಳುತ್ತೇನೆ. ನಾನು ಹೋಗುವುದು ಎಲ್ಲಿಗೆ ಎಂದು ನೀವು ಯಾರೂ ಕೇಳುತ್ತಿಲ್ಲವಾದರೂ 6ಇದನ್ನೆಲ್ಲಾ ನಾನು ನಿಮಗೆ ಹೇಳಿದ್ದರಿಂದ ನಿಮ್ಮ ಹೃದಯವು ದುಃಖಭರಿತವಾಗಿದೆ. 7ವಾಸ್ತವವಾಗಿ ಹೇಳುವುದಾದರೆ, ನಾನು ಹೋಗುವುದು ನಿಮ್ಮ ಹಿತಕ್ಕಾಗಿಯೇ. ನಾನು ಹೋಗದಿದ್ದರೆ, ಪೋಷಕ ನಿಮ್ಮಲ್ಲಿಗೆ ಬರುವುದಿಲ್ಲ. ನಾನು ಹೋದರೆ ಮಾತ್ರ ಅವರನ್ನು ನಿಮ್ಮಲ್ಲಿಗೆ ಕಳುಹಿಸಿಕೊಡಬಲ್ಲೆ. 8ಆ ಪೋಷಕ ಬಂದು ಪಾಪ, ನ್ಯಾಯನೀತಿ, ಮತ್ತು ಅಂತಿಮತೀರ್ಪು ಇವುಗಳನ್ನು ಕುರಿತು ಲೋಕದ ಜನತೆ ತಾಳಿದ್ದ ತಪ್ಪುಭಾವನೆಗಳನ್ನು ಮನವರಿಕೆ ಮಾಡಿಕೊಡುವರು. 9ಪಾಪದ ವಿಷಯವಾಗಿ ಅವರ ತಪ್ಪುಭಾವನೆಯನ್ನು ಮನವರಿಕೆ ಮಾಡಿಕೊಡುವರು. ಏಕೆಂದರೆ, ಅವರು ನನ್ನಲ್ಲಿ ವಿಶ್ವಾಸ ಇಡಲಿಲ್ಲ. 10ನ್ಯಾಯನೀತಿಯ ವಿಷಯವಾಗಿ ಅವರ ತಪ್ಪುಭಾವನೆಯನ್ನು ಮನವರಿಕೆ ಮಾಡಿಕೊಡುವರು. ಏಕೆಂದರೆ, ನಾನು ಪಿತನ ಬಳಿಗೆಹೋಗುತ್ತೇನೆ ಮತ್ತು ನೀವು ನನ್ನನ್ನು ಕಾಣಲಾರಿರಿ. 11ಅಂತಿಮ ತೀರ್ಪಿನ ವಿಷಯವಾಗಿ ಅವರ ತಪ್ಪುಭಾವನೆಯನ್ನು ಮನವರಿಕೆ ಮಾಡಿಕೊಡುವರು. ಏಕೆಂದರೆ, ಇಹದ ಲೋಕಾಧಿಪತಿಗೆ ಈಗಾಗಲೇ ನ್ಯಾಯತೀರ್ಪನ್ನು ಕೊಡಲಾಗಿದೆ. 12ನಾನು ನಿಮಗೆ ಹೇಳಬೇಕಾದುದು ಇನ್ನೂ ಎಷ್ಟೋ ಇದೆ. ಸಧ್ಯಕ್ಕೆ ಅವು ನಿಮಗೆ ಹೊರಲಾಗದ ಹೊರೆಯಾಗಬಾರದು. 13ಹೇಗೂ ಸತ್ಯಸ್ವರೂಪಿ ಆದ ಪವಿತ್ರಾತ್ಮ ಬಂದಮೇಲೆ ನಿಮ್ಮನ್ನು ಸಮಗ್ರ ಸತ್ಯದೆಡೆಗೆ ಕರೆದೊಯ್ಯುವರು. ಅವರು ತಮ್ಮಷ್ಟಕ್ಕೆ ತಾವೇ ಏನನ್ನೂ ಬೋಧಿಸದೆ ತಾವು ಕೇಳಿದುದನ್ನು ಕುರಿತೇ ಮಾತನಾಡುವರು; ಮುಂದೆ ನಡೆಯಲಿರುವುದನ್ನೂ ನಿಮಗೆ ತಿಳಿಸುವರು. 14ಅವರು, ನಾನು ಹೇಳಿದವುಗಳಿಂದಲೇ ಆಯ್ದು ನಿಮಗೆ ತಿಳಿಯಪಡಿಸಿ ನನ್ನ ಮಹಿಮೆಯನ್ನು ಬೆಳಗಿಸುವರು. 15ಪಿತನಿಗೆ ಇರುವುದೆಲ್ಲವೂ ನನ್ನದೇ. ಆದುದರಿಂದಲೇ ಪವಿತ್ರಾತ್ಮ ನಾನು ಹೇಳಿದವುಗಳಿಂದಲೇ ಆಯ್ದು ನಿಮಗೆ ತಿಳಿಯಪಡಿಸುವರೆಂದು ನಾನು ಹೇಳಿದ್ದು.
ನೋವು ನಲಿವು
16“ತುಸುಕಾಲವಾದ ನಂತರ ನೀವು ನನ್ನನ್ನು ಕಾಣಲಾರಿರಿ. ಅನಂತರ ತುಸುಕಾಲ ಕಳೆಯುತ್ತಲೇ ನನ್ನನ್ನು ಪುನಃ ಕಾಣುವಿರಿ,” ಎಂದರು ಯೇಸು ಸ್ವಾಮಿ.
17ಇದನ್ನು ಕೇಳಿದ ಕೆಲವು ಮಂದಿ ಶಿಷ್ಯರು, “ಇದೇನು ಇವರು ಹೇಳುತ್ತಿರುವುದು? ‘ತುಸು ಕಾಲವಾದ ನಂತರ ನೀವು ನನ್ನನ್ನು ಕಾಣಲಾರಿರಿ. ಅನಂತರ ತುಸುಕಾಲ ಕಳೆಯುತ್ತಲೇ ನೀವು ನನ್ನನ್ನು ಪುನಃ ಕಾಣುವಿರಿ ಮತ್ತು ಪಿತನಲ್ಲಿಗೆ ನಾನು ಹೋಗುತ್ತೇನೆ,’ ಎನ್ನುತ್ತಾರಲ್ಲ? 18‘ತುಸುಕಾಲ’ ಎಂದರೇನು? ಇವರ ಮಾತೇ ನಮಗೆ ಅರ್ಥವಾಗುತ್ತಿಲ್ಲವಲ್ಲಾ” ಎಂದು ತಮ್ಮತಮ್ಮೊಳಗೆ ಮಾತನಾಡತೊಡಗಿದರು. 19ಯೇಸು, ತಮ್ಮಲ್ಲಿ ಅವರು ವಿಚಾರಿಸಬೇಕೆಂದಿದ್ದಾರೆಂದು ತಿಳಿದುಕೊಂಡು, ‘ತುಸುಕಾಲದ ನಂತರ ನೀವು ನನ್ನನ್ನು ಕಾಣಲಾರಿರಿ. ಅನಂತರ ತುಸುಕಾಲ ಕಳೆಯುತ್ತಲೇ ನನ್ನನ್ನು ಪುನಃ ಕಾಣುವಿರಿ’ ಎಂದು ನಾನು ಹೇಳಿದ್ದನ್ನು ಕುರಿತು ನಿಮ್ಮನಿಮ್ಮಲ್ಲಿಯೇ ನೀವು ಚರ್ಚಿಸುತ್ತಿರುವುದೇನು? 20ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ; ನೀವು ಅತ್ತುಗೋಳಾಡುವಿರಿ; ಲೋಕವಾದರೋ ನಕ್ಕು ನಲಿದಾಡುವುದು. ನೀವು ದುಃಖಪಡುವಿರಿ. ಆದರೆ ನಿಮ್ಮ ದುಃಖ ಆನಂದವಾಗಿ ಮಾರ್ಪಡುವುದು. 21ಗರ್ಭಿಣಿಯಾದ ಸ್ತ್ರೀಯು ಪ್ರಸವಿಸುವ ಗಳಿಗೆ ಬಂದಾಗ ವೇದನೆಪಡುತ್ತಾಳೆ; ಮಗುವನ್ನು ಹೆರುತ್ತಲೇ ಜಗದಲ್ಲಿ ಮಾನವನೊಬ್ಬನು ಜನಿಸಿದನೆಂಬ ಉಲ್ಲಾಸದಿಂದ ತಾನು ಪಟ್ಟ ವೇದನೆಯನ್ನು ಮರೆತುಬಿಡುತ್ತಾಳೆ; 22ನಿಮಗೆ ಈಗ ದುಃಖವಿದೆ; ನಾನು ನಿಮ್ಮನ್ನು ಮರಳಿ ಕಂಡಾಗ, ಹರ್ಷಿಸುವಿರಿ. ಆ ಹರ್ಷವನ್ನು ಯಾರೂ ನಿಮ್ಮಿಂದ ಕಸಿದುಕೊಳ್ಳುವುದಿಲ್ಲ. 23ಆ ದಿನದಂದು ನನ್ನಿಂದ ನೀವೇನನ್ನೂ ಕೇಳುವಂತಿಲ್ಲ. ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ನೀವು ಪಿತನಲ್ಲಿ ಏನನ್ನು ಬೇಡಿಕೊಂಡರೂ ನಿಮಗೆ ಅವರು ನನ್ನ ಹೆಸರಿನಲ್ಲಿ ಕೊಟ್ಟೇತೀರುವರು. 24ಈ ತನಕ ನನ್ನ ಹೆಸರಿನಲ್ಲಿ ನೀವೇನನ್ನೂ ಕೇಳಲಿಲ್ಲ. ಕೇಳಿ, ನಿಮಗೆ ದೊರೆಯುವುದು. ಆಗ ನಿಮ್ಮ ಆನಂದವು ತುಂಬಿ ತುಳುಕುವುದು.
ಲೋಕದ ಮೇಲೆ ವಿಜಯ
25“ಈ ಸಂಗತಿಗಳನ್ನೆಲ್ಲಾ ನಿಮಗೆ ಸಾಮತಿಗಳ ರೂಪದಲ್ಲಿ ತಿಳಿಸಿರುವೆನು. ಕಾಲವು ಬರಲಿದೆ. ಆಗ ಸಾಮತಿಗಳನ್ನು ಬಳಸದೆ ಸ್ಪಷ್ಟವಾದ ಮಾತಿನಲ್ಲಿ ಪಿತನನ್ನು ಕುರಿತು ನಿಮಗೆ ತಿಳಿಸುವೆನು. 26ಆ ಕಾಲವು ಬಂದಾಗ ನನ್ನ ಹೆಸರು ಹೇಳಿ ನೀವೇ ಪಿತನಲ್ಲಿ ಬೇಡುವಿರಿ. ನಿಮ್ಮ ಪರವಾಗಿ ನಾನು ಪಿತನಲ್ಲಿ ಬೇಡಿಕೊಳ್ಳುವೆನೆಂದು ನಾನು ಹೇಳುವುದಿಲ್ಲ. 27ಕಾರಣ, ಪಿತನೇ ನಿಮ್ಮನ್ನು ಪ್ರೀತಿಸುತ್ತಾರೆ. ನೀವು ನನ್ನನ್ನು ಪ್ರೀತಿಸಿ ನಾನು ಅವರಿಂದ ಬಂದವನೆಂದು ವಿಶ್ವಾಸಿಸಿದ್ದರಿಂದ ಪಿತನಿಗೆ ನಿಮ್ಮ ಮೇಲೆ ಅಕ್ಕರೆಯಿದೆ. 28ಹೌದು, ನಾನು ಪಿತನಿಂದಲೇ ಹೊರಟು ಈ ಲೋಕಕ್ಕೆ ಬಂದಿದ್ದೇನೆ. ಈಗ ಈ ಲೋಕವನ್ನು ಬಿಟ್ಟು ಪಿತನಲ್ಲಿಗೆ ಹೋಗುತ್ತಿದ್ದೇನೆ,” ಎಂದರು. 29ಅದಕ್ಕೆ ಶಿಷ್ಯರು, “ಈಗ ನೀವು ಸಾಮತಿಗಳನ್ನು ಬಳಸದೆ ಸ್ಪಷ್ಟವಾಗಿಯೇ ಮಾತನಾಡುತ್ತಿದ್ದೀರಿ. 30ನೀವು ಎಲ್ಲವನ್ನೂ ಬಲ್ಲವರು. ಪ್ರಶ್ನೆಗಳಿಗಾಗಿ ನೀವು ಕಾಯಬೇಕಿಲ್ಲ ಎಂದು ನಮಗೀಗ ತಿಳಿಯಿತು. ಆದುದರಿಂದ ನೀವು ದೇವರಿಂದ ಬಂದವರೆಂದು ನಾವು ವಿಶ್ವಾಸಿಸುತ್ತೇವೆ,” ಎಂದರು. 31ಆಗ ಯೇಸು ಸ್ವಾಮಿ, “ಈಗ ನೀವು ವಿಶ್ವಾಸಿಸುತ್ತೀರೋ? 32ನೀವೆಲ್ಲರೂ ನನ್ನನ್ನು ಒಬ್ಬಂಟಿಗನಾಗಿ ಬಿಟ್ಟು ನಿಮ್ಮನಿಮ್ಮ ಮನೆಗೆ ಚದರಿಹೋಗುವ ಕಾಲವು ಬರುತ್ತದೆ. ಈಗಾಗಲೇ ಬಂದಿದೆ. ಆದರೆ ಪಿತನು ನನ್ನೊಡನೆ ಇರುವುದರಿಂದ ನಾನು ಒಬ್ಬಂಟಿಗನಲ್ಲ. 33ನಿಮಗೆ ನನ್ನಲ್ಲಿ ಶಾಂತಿಸಮಾಧಾನ ಲಭಿಸಲೆಂದು ಇದನ್ನೆಲ್ಲಾ ನಿಮಗೆ ಹೇಳಿದ್ದೇನೆ. ಲೋಕದಲ್ಲಿ ನಿಮಗೆ ಕಷ್ಟಸಂಕಟಗಳು ತಪ್ಪಿದ್ದಲ್ಲ, ಆದರೆ ಧೈರ್ಯವಾಗಿರಿ. ನಾನು ಲೋಕವನ್ನು ಜಯಿಸಿದ್ದೇನೆ,” ಎಂದು ಹೇಳಿದರು.

Àwon tá yàn lọ́wọ́lọ́wọ́ báyìí:

ಯೊವಾನ್ನ 16: KANCLBSI

Ìsàmì-sí

Pín

Daako

None

Ṣé o fẹ́ fi àwọn ohun pàtàkì pamọ́ sórí gbogbo àwọn ẹ̀rọ rẹ? Wọlé pẹ̀lú àkántì tuntun tàbí wọlé pẹ̀lú àkántì tí tẹ́lẹ̀