ಯೊವಾನ್ನ 18

18
ಯೇಸುವಿನ ಬಂಧನ
(ಮತ್ತಾ. 26:47-56; ಮಾರ್ಕ. 14:43-50; ಲೂಕ. 22:47-53)
1ಯೇಸು ಸ್ವಾಮಿ ಹೀಗೆ ಹೇಳಿದ ಬಳಿಕ ತಮ್ಮ ಶಿಷ್ಯರೊಡನೆ ಹೊರಟು, ಕೆದ್ರೋನ್ ಹಳ್ಳವನ್ನು ದಾಟಿ, ಅಲ್ಲೇ ಇದ್ದ ತೋಟವನ್ನು ಹೊಕ್ಕರು. 2ಅವರು ತಮ್ಮ ಶಿಷ್ಯರೊಡನೆ ಆಗಾಗ ಅಲ್ಲಿಗೆ ಬರುವುದು ವಾಡಿಕೆ. ಅವರನ್ನು ಹಿಡಿದುಕೊಡಲಿದ್ದ ಯೂದನಿಗೆ ಆ ಸ್ಥಳ ಚೆನ್ನಾಗಿ ಗೊತ್ತಿತ್ತು. 3ಆದುದರಿಂದ ಯೂದನು ಸೈನಿಕರ ಒಂದು ತಂಡವನ್ನೂ ಮುಖ್ಯಯಾಜಕರು ಮತ್ತು ಫರಿಸಾಯರು ಕಳುಹಿಸಿದ ಕಾವಲಾಳುಗಳನ್ನೂ ಕರೆದುಕೊಂಡು ದೀವಟಿಗೆ, ಪಂಜು ಮತ್ತು ಆಯುಧಗಳ ಸಮೇತ ಅಲ್ಲಿಗೆ ಬಂದನು. 4ಯೇಸು ಸ್ವಾಮಿಗೆ ತಮಗೆ ಸಂಭವಿಸಲಿರುವುದೆಲ್ಲವೂ ತಿಳಿದಿತ್ತು. ಎಂದೇ ಮುಂದೆ ಬಂದು, “ನೀವು ಯಾರನ್ನು ಹುಡುಕುತ್ತಿದ್ದೀರಿ?” ಎಂದು ಕೇಳಿದರು. 5ಅವರು, “ನಜರೇತಿನ ಯೇಸುವನ್ನು,” ಎಂದರು. ಯೇಸು, “ನಾನೇ ಆತ,” ಎಂದು ಉತ್ತರಕೊಟ್ಟರು. ಅವರನ್ನು ಹಿಡಿದುಕೊಡಲಿದ್ದ ಗುರುದ್ರೋಹಿ ಯೂದನು ಅವರ ಸಂಗಡವೇ ನಿಂತುಕೊಂಡಿದ್ದನು. 6“ನಾನೇ ಆತನು,” ಎಂದು ಯೇಸು ನುಡಿಯುತ್ತಲೇ, ಅವರೆಲ್ಲರೂ ಹಿಂದೆ ಸರಿದು ನೆಲದ ಮೇಲೆ ಬಿದ್ದರು. 7ಯೇಸು ಮತ್ತೊಮ್ಮೆ, “ನೀವು ಯಾರನ್ನು ಹುಡುಕುತ್ತಿದ್ದೀರಿ?” ಎಂದು ಕೇಳಲು, “ನಜರೇತಿನ ಯೇಸುವನ್ನು,” ಎಂದು ಉತ್ತರಬಂದಿತು. 8ಅದಕ್ಕೆ ಯೇಸು, “ನಾನೇ ಆತನೆಂದು ನಿಮಗೆ ಆಗಲೇ ಹೇಳಿದೆ. ನೀವು ಹುಡುಕುತ್ತಾ ಇರುವುದು ನನ್ನನ್ನಾದರೆ, ಮಿಕ್ಕ ಇವರನ್ನು ಹೋಗಬಿಡಿ,” ಎಂದು ನುಡಿದರು. 9(’ನೀವು ನನಗೆ ಕೊಟ್ಟವರಲ್ಲಿ ಒಬ್ಬನನ್ನಾದರೂ ಕಳೆದುಕೊಳ್ಳಲಿಲ್ಲ’ ಎಂದು ತಾವೇ ನುಡಿದ ಮಾತು ನೆರವೇರುವಂತೆ ಯೇಸು ಹೀಗೆಂದರು). 10ಅಷ್ಟರೊಳಗೆ ಸಿಮೋನ ಪೇತ್ರನು ತನ್ನಲ್ಲಿದ್ದ ಖಡ್ಗವನ್ನು ಹಿರಿದು, ಪ್ರಧಾನಯಾಜಕನ ಸೇವಕನಾದ ಮಾಲ್ಕನ ಬಲಗಿವಿಯನ್ನು ಕತ್ತರಿಸಿಬಿಟ್ಟನು. 11ಆಗ ಯೇಸು ಪೇತ್ರನಿಗೆ, “ನಿನ್ನ ಖಡ್ಗವನ್ನು ಒರೆಯಲ್ಲಿ ಹಾಕು, ನನ್ನ ಪಿತನೇ ಕೊಟ್ಟಿರುವ ಕಷ್ಟದ ಕೊಡವಿದು; ಇದರಲ್ಲಿರುವುದನ್ನು ನಾನು ಕುಡಿಯದೆಹೋದರೆ ಹೇಗೆ?” ಎಂದು ನುಡಿದರು.
ಅನ್ನನ ಮುಂದೆ ಯೇಸು
12ಅನಂತರ ಸೈನಿಕರು, ಸಹಸ್ರಾಧಿಪತಿ ಹಾಗು ಯೆಹೂದ್ಯರು ಕಳುಹಿಸಿದ್ದ ಕಾವಲಾಳುಗಳು ಯೇಸುವನ್ನು ಹಿಡಿದು ಕಟ್ಟಿ ಮೊದಲು ಅನ್ನನ ಬಳಿಗೆ ಕೊಂಡೊಯ್ದರು. 13ಅನ್ನನು, ಆ ವರ್ಷ ಪ್ರಧಾನಯಾಜಕನಾಗಿದ್ದ ಕಾಯಫನ ಮಾವ. 14ಸಮಸ್ತ ಜನತೆಗಾಗಿ ಒಬ್ಬನು ಸತ್ತರೆ ವಿಹಿತವೆಂದು ಸಲಹೆಕೊಟ್ಟವನು ಈ ಕಾಯಫನೇ.
ಗುರುವನ್ನು ಅಲ್ಲಗಳೆದ ಪೇತ್ರ
(ಮತ್ತಾ. 26:69-70; ಮಾರ್ಕ. 14:66-68; ಲೂಕ. 22:55-57)
15ಸಿಮೋನ್ ಪೇತ್ರನು ಮತ್ತು ಪ್ರಧಾನಯಾಜಕನಿಗೆ ಪರಿಚಿತನಾಗಿದ್ದ ಇನ್ನೊಬ್ಬ ಶಿಷ್ಯನು ಯೇಸು ಸ್ವಾಮಿಯನ್ನು ಹಿಂಬಾಲಿಸುತ್ತಾ ಹೋದರು.ಪರಿಚಿತನಾಗಿದ್ದ ಶಿಷ್ಯನು ಯೇಸುವಿನೊಡನೆ ಪ್ರಧಾನಯಾಜಕನ ಮನೆಯ ಅಂಗಳವನ್ನು ಹೊಕ್ಕನು. 16ಪೇತ್ರನು ಹೊರಗಡೆ ಬಾಗಿಲ ಬಳಿಯಲ್ಲೇ ನಿಂತನು. ಪರಿಚಿತನಾಗಿದ್ದವನು ಅನಂತರ ಹೊರಗೆ ಬಂದು ದ್ವಾರಪಾಲಕಿಗೆ ಹೇಳಿ ಪೇತ್ರನನ್ನು ಒಳಕ್ಕೆ ಕರೆದುಕೊಂಡುಹೋದನು. 17ಆ ದ್ವಾರಪಾಲಕಿಯು ಪೇತ್ರನನ್ನು ನೋಡಿ, “ನೀನೂ ಯೇಸುವಿನ ಶಿಷ್ಯರಲ್ಲಿ ಒಬ್ಬನಲ್ಲವೆ?” ಎಂದು ಕೇಳಿದಳು. ಅದಕ್ಕೆ ಪೇತ್ರನು, “ಇಲ್ಲ, ನಾನಲ್ಲ,” ಎಂದುಬಿಟ್ಟನು. 18ಆಗ ಚಳಿಯಿದ್ದುದರಿಂದ ಸೇವಕರೂ ಕಾವಲಾಳುಗಳೂ ಇದ್ದಲಿನ ಬೆಂಕಿಮಾಡಿ, ಸುತ್ತಲೂ ನಿಂತು ಚಳಿಕಾಯಿಸಿಕೊಳ್ಳುತ್ತಿದ್ದರು. ಪೇತ್ರನೂ ಅವರ ಸಂಗಡ ನಿಂತುಕೊಂಡು ಚಳಿಕಾಯಿಸಿಕೊಳ್ಳತೊಡಗಿದನು.
ಪ್ರಧಾನಯಾಜಕನಿಂದ ವಿಚಾರಣೆ
(ಮತ್ತಾ. 26:59-66; ಮಾರ್ಕ. 14:55-64; ಲೂಕ. 22:66-71)
19ಅಷ್ಟರಲ್ಲಿ ಪ್ರಧಾನಯಾಜಕನು ಯೇಸು ಸ್ವಾಮಿಯನ್ನು ಅವರ ಶಿಷ್ಯರ ವಿಷಯವಾಗಿ ಹಾಗು ಬೋಧನೆಯ ವಿಷಯವಾಗಿ ವಿಚಾರಿಸಿದನು. 20ಆಗ ಯೇಸು ಸ್ವಾಮಿ, “ನಾನು ಬಹಿರಂಗವಾಗಿಯೇ ಜನರೆಲ್ಲರೂ ಕೇಳುವಂತೆ ಮಾತನಾಡಿದ್ದೇನೆ; ಯೆಹೂದ್ಯರೆಲ್ಲರು ಸಭೆಸೇರುವ ಪ್ರಾರ್ಥನಾಮಂದಿರಗಳಲ್ಲಿಯೂ ಮಹಾದೇವಾಲಯದಲ್ಲಿಯೂ ನಾನು ಯಾವಾಗಲೂ ಬೋಧನೆಮಾಡಿಕೊಂಡು ಬಂದಿದ್ದೇನೆ. ಮುಚ್ಚುಮರೆಯಾಗಿ ಏನನ್ನೂ ಹೇಳಿಲ್ಲ. 21ನನ್ನನ್ನು ವಿಚಾರಿಸುವುದೇಕೆ? ನಾನು ಹೇಳಿದ್ದನ್ನು ಯಾರು ಕೇಳಿದ್ದಾರೋ ಅವರನ್ನೇ ವಿಚಾರಿಸಿರಿ. ನಾನು ಬೋಧನೆಮಾಡಿದ್ದು ಏನೆಂದು ಅವರು ಬಲ್ಲರು,” ಎಂದು ಉತ್ತರಕೊಟ್ಟರು. 22ಯೇಸು ಹೀಗೆ ಹೇಳಲು ಬಳಿಯಲ್ಲೇ ನಿಂತಿದ್ದ ಕಾವಲಾಳೊಬ್ಬನು, “ಪ್ರಧಾನ ಯಾಜಕರಿಗೆ ಉತ್ತರಕೊಡುವುದು ಹೀಗೆಯೇ?” ಎಂದು ಕೆನ್ನೆಗೆ ಹೊಡೆದನು. 23ಆಗ ಯೇಸು, “ನಾನು ಆಡಿದ್ದು ತಪ್ಪಾಗಿದ್ದರೆ, ತಪ್ಪನ್ನು ತೋರಿಸಿಕೊಡು; ಸತ್ಯವಾಗಿದ್ದರೆ ಏಕೆ ಹೊಡೆಯುತ್ತೀ?” ಎಂದರು. 24ಆಗ ಅನ್ನನು ಯೇಸುವನ್ನು ಬಂಧಿಸಿ ಕಾಯಫನ ಬಳಿಗೆ ಕಳುಹಿಸಿದನು.
ಮತ್ತೊಮ್ಮೆ ಅಲ್ಲಗಳೆದ ಪೇತ್ರ
(ಮತ್ತಾ. 26:71-75; ಮಾರ್ಕ. 14:69-72; ಲೂಕ. 22:58-62)
25ಇತ್ತ ಪೇತ್ರನು ನಿಂತು ಚಳಿಕಾಯಿಸಿಕೊಳ್ಳುತ್ತಾ ಇದ್ದನು. ಅಲ್ಲಿದ್ದವರು, “ನೀನು ಯೇಸುವಿನ ಶಿಷ್ಯರಲ್ಲಿ ಒಬ್ಬನಲ್ಲವೇ?’ ಎಂದು ಕೇಳಿದರು. ಪೇತ್ರನು, “ಇಲ್ಲ, ನಾನು ಶಿಷ್ಯನಲ್ಲ,” ಎಂದು ನಿರಾಕರಿಸಿದನು. 26ಪ್ರಧಾನಯಾಜಕನ ಸೇವಕರಲ್ಲಿ ಒಬ್ಬನು, (ಇವನು ಪೇತ್ರನು ಕಿವಿ ಕತ್ತರಿಸಿದವನ ನೆಂಟ) “ನಿನ್ನನ್ನು ಆತನೊಡನೆ ತೋಟದಲ್ಲಿ ನಾನು ನೋಡಲಿಲ್ಲವೇ?” ಎಂದು ಕೇಳಿದನು. 27ಪೇತ್ರನು ಪುನಃ ಅಲ್ಲಗಳೆದನು. ಕೂಡಲೇ ಕೋಳಿ ಕೂಗಿತು.
ಪಿಲಾತನ ಮುಂದೆ ಯೇಸು
(ಮತ್ತಾ. 27:1-2,11-14; ಮಾರ್ಕ. 15:1-5; ಲೂಕ. 23:1-5)
28ಆಮೇಲೆ ಅವರು ಯೇಸುವನ್ನು ಕಾಯಫನ ಮನೆಯಿಂದ ರಾಜ್ಯಪಾಲನ ನಿವಾಸಕ್ಕೆ ಕೊಂಡೊಯ್ದರು. ಆಗ ಮುಂಜಾನೆ, ಅರಮನೆಯೊಳಗೆ ಹೋದರೆ ಮಡಿಗೆಟ್ಟು ಹಬ್ಬದೂಟಕ್ಕೆ ಅಡ್ಡಿಯಾದೀತೆಂದು ಅವರೆಲ್ಲರು ಹೊರಗೇ ನಿಂತರು. 29ಆದುದರಿಂದ ಪಿಲಾತನೇ ಅವರ ಬಳಿಗೆ ಬಂದು, “ಈತನ ಮೇಲೆ ನಿಮ್ಮ ದೂರು ಏನು?” ಎಂದು ಕೇಳಿದನು. 30ಅವರು, “ಇವನು ಅಪರಾಧಿಯಲ್ಲದಿದ್ದರೆ, ಇವನನ್ನು ನಿಮಗೆ ತಂದೊಪ್ಪಿಸುತ್ತಿರಲಿಲ್ಲ,” ಎಂದರು. 31ಅದಕ್ಕೆ ಪಿಲಾತನು, “ಹಾಗಾದರೆ ನೀವೇ ಕರೆದುಕೊಂಡುಹೋಗಿ, ನಿಮ್ಮ ಧರ್ಮಶಾಸ್ತ್ರದ ಪ್ರಕಾರ ಈತನಿಗೆ ತೀರ್ಪುಕೊಡಿ,” ಎಂದನು. ಯೆಹೂದ್ಯರು, “ಮರಣದಂಡನೆ ವಿಧಿಸುವ ಅಧಿಕಾರ ನಮಗಿಲ್ಲವಲ್ಲಾ,” ಎಂದು ಉತ್ತರಿಸಿದರು. 32ಯೇಸು ತಮಗೆ ಯಾವ ಬಗೆಯ ಮರಣ ಕಾದಿರುವುದೆಂದು ಸೂಚಿಸಿ ಹೇಳಿದ ಮಾತು ಹೀಗೆ ನೆರವೇರುವಂತಾಯಿತು. 33ಆಗ ಪಿಲಾತನು ಅರಮನೆಯೊಳಗೆ ಹೋಗಿ ಯೇಸು ಸ್ವಾಮಿಯನ್ನು ಕರೆಯಿಸಿ, “ನೀನು ಯೆಹೂದ್ಯರ ಅರಸನೋ?’ ಎಂದು ಕೇಳಿದನು. 34ಅದಕ್ಕೆ ಯೇಸು, “ನೀವಾಗಿಯೇ ಇದನ್ನು ಹೇಳುತ್ತಿರುವಿರೋ ಅಥವಾ ಬೇರೆ ಯಾರಾದರೂ ನನ್ನನ್ನು ಕುರಿತು ಹೀಗೆ ಹೇಳಿದರೋ?” ಎನ್ನಲು 35ಪಿಲಾತನು, “ನಾನೇನು ಯೆಹೂದ್ಯನೇ? ನಿನ್ನ ಸ್ವಂತ ಜನರು ಮತ್ತು ಮುಖ್ಯ ಯಾಜಕರು ನಿನ್ನನ್ನು ನನ್ನ ಕೈಗೆ ಒಪ್ಪಿಸಿದ್ದಾರೆ. ನೀನು ಏನು ಮಾಡಿದ್ದೀಯಾ?” ಎಂದು ಕೇಳಿದನು. 36ಅದಕ್ಕೆ ಯೇಸು, “ನನ್ನ ಸಾಮ್ರಾಜ್ಯ ಈ ಲೋಕದ್ದಲ್ಲ, ನನ್ನ ಸಾಮ್ರಾಜ್ಯ ಈ ಲೋಕದ್ದಾಗಿದ್ದರೆ, ಯೆಹೂದ್ಯರ ಕೈಗೆ ನಾನು ಬೀಳದಂತೆ ನನ್ನ ಅನುಯಾಯಿಗಳು ಕಾದಾಡುತ್ತಿದ್ದರು. ನಿಜವಾಗಿಯೂ ನನ್ನ ಸಾಮ್ರಾಜ್ಯ ಇಹಲೋಕದ್ದಲ್ಲ,” ಎಂದರು. 37ಪಿಲಾತನು, “ಹಾಗಾದರೆ ನೀನೊಬ್ಬ ಅರಸನೋ?’ ಎಂದು ಕೇಳಲು ಯೇಸು, “ ‘ಅರಸ’ ಎನ್ನುವುದು ನೀವು ಹೇಳುವ ಮಾತು. ಸತ್ಯವನ್ನು ಕುರಿತು ಸಾಕ್ಷಿ ಹೇಳುವುದು ನನ್ನ ಕೆಲಸ. ಅದಕ್ಕಾಗಿಯೇ ನಾನು ಹುಟ್ಟಿದುದು. ಅದಕ್ಕಾಗಿಯೇ ನಾನು ಜಗತ್ತಿಗೆ ಬಂದುದು. ಸತ್ಯಪರರೆಲ್ಲರೂ ನನ್ನ ಮಾತಿಗೆ ಕಿವಿಗೊಡುತ್ತಾರೆ,” ಎಂದು ಹೇಳಿದರು. 38ಆಗ ಪಿಲಾತನು, “ಸತ್ಯ, ಸತ್ಯ ಎಂದರೆ ಏನು?” ಎಂದು ಪ್ರಶ್ನಿಸಿ ಅಲ್ಲಿ ನಿಲ್ಲದೆ ಹೊರಗೆಬಂದನು.
ಯೇಸುವಿಗೆ ಮರಣದಂಡನೆ
(ಮತ್ತಾ. 27:15-31; ಮಾರ್ಕ. 15:6-20; ಲೂಕ. 23:13-25)
39ಹೀಗೆ ಪಿಲಾತನು ಹೊರಗೆ ಯೆಹೂದ್ಯರ ಬಳಿಗೆ ಬಂದು, “ನನಗೆ ಈತನಲ್ಲಿ ಯಾವ ಅಪರಾಧವೂ ಕಾಣುವುದಿಲ್ಲ. ಪಾಸ್ಕಹಬ್ಬದ ಸಂದರ್ಭದಲ್ಲಿ ಒಬ್ಬ ಸೆರೆಯಾಳನ್ನು ಬಿಡುಗಡೆಮಾಡುವ ಪದ್ಧತಿಯಿದೆಯಷ್ಟೆ? ಆದ್ದರಿಂದ ನೀವು ಬಯಸಿದರೆ ಯೆಹೂದ್ಯರ ಅರಸನನ್ನು ನಾನು ಬಿಡುಗಡೆ ಮಾಡುತ್ತೇನೆ,” ಎಂದು ಹೇಳಿದನು. 40ಅದಕ್ಕೆ ಅವರು, “ಬೇಡ, ಇವನು ಬೇಡ. ನಮಗೆ ಬರಬ್ಬನನ್ನು ಬಿಟ್ಟುಕೊಡಿ,” ಎಂದು ಬೊಬ್ಬೆಹಾಕಿದರು. ಬರಬ್ಬನೋ ಒಬ್ಬ ದರೋಡೆಕೋರನಾಗಿದ್ದನು.

Àwon tá yàn lọ́wọ́lọ́wọ́ báyìí:

ಯೊವಾನ್ನ 18: KANCLBSI

Ìsàmì-sí

Pín

Daako

None

Ṣé o fẹ́ fi àwọn ohun pàtàkì pamọ́ sórí gbogbo àwọn ẹ̀rọ rẹ? Wọlé pẹ̀lú àkántì tuntun tàbí wọlé pẹ̀lú àkántì tí tẹ́lẹ̀