Akara Njirimara YouVersion
Akara Eji Eme Ọchịchọ

ಆದಿಕಾಂಡ 3

3
ಮಾನವನ ಪತನ
1ಸರ್ವೇಶ್ವರನಾದ ದೇವರು ಉಂಟುಮಾಡಿದ ಭೂಜಂತುಗಳಲ್ಲಿ ಅತಿ ಯುಕ್ತಿ ಉಳ್ಳದ್ದು ಸರ್ಪ. ಅದು ಮಹಿಳೆಯ ಬಳಿಗೆ ಬಂದು, “ಏನಮ್ಮಾ, ತೋಟದಲ್ಲಿರುವ ಯಾವ ಮರದ ಹಣ್ಣನ್ನೂ ತಿನ್ನಕೂಡದು ಎಂದು ದೇವರು ಆಜ್ಞೆ ಮಾಡಿರುವುದು ನಿಜವೋ?” ಎಂದು ಕೇಳಿತು.
2ಅದಕ್ಕೆ ಆ ಮಹಿಳೆ, “ತೋಟದಲ್ಲಿರುವ ಮರಗಳ ಹಣ್ಣುಗಳನ್ನು ನಾವು ತಿನ್ನಬಹುದು; 3ಆದರೆ ಅದರ ನಡುವೆಯಿರುವ ಈ ಮರದ ಹಣ್ಣನ್ನು ಮಾತ್ರ ತಿನ್ನಲೂ ಕೂಡದು, ಮುಟ್ಟಲೂ ಕೂಡದು, ‘ತಿಂದರೆ ಸಾಯುವಿರಿ’ ಎಂದು ದೇವರು ಹೇಳಿದ್ದಾರೆ,” ಎಂದು ಉತ್ತರಕೊಟ್ಟಳು.
4ಆಗ ಆ ಸರ್ಪ, “ಆ ಮಾತು ನಿಜವಲ್ಲ, ನೀವು ಸಾಯುವುದು ಸುಳ್ಳು. 5ಇದರ ಹಣ್ಣನ್ನು ತಿಂದ ಕೂಡಲೆ ನಿಮ್ಮ ಕಣ್ಣುಗಳು ತೆರೆಯುವುವು, ನೀವು ದೇವರಂತೆ ಆಗಿ ಒಳಿತು - ಕೆಡಕುಗಳನ್ನರಿತ ಜ್ಞಾನಿಗಳು ಆಗಿಬಿಡುವಿರಿ. ಇದು ದೇವರಿಗೆ ಚೆನ್ನಾಗಿ ಗೊತ್ತುಂಟು,” ಎಂದಿತು.
6ಆಗ ಆ ಮಹಿಳೆ, “ಈ ಮರದ ಹಣ್ಣು ಊಟಕ್ಕೆ ಎಷ್ಟು ಚೆನ್ನಾಗಿದೆ, ನೋಟಕ್ಕೆ ಎಷ್ಟು ರಮಣೀಯವಾಗಿದೆ. ಜ್ಞಾನಾರ್ಜನೆಗೆ ಎಷ್ಟು ಆಕರ್ಷಣೀಯವಾಗಿದೆ” ಎಂದು ತಿಳಿದು, ಅದನ್ನು ತೆಗೆದುಕೊಂಡು ತಿಂದಳು; ಸಂಗಡವಿದ್ದ ಗಂಡನಿಗೂ ಕೊಟ್ಟಳು; ಅವನೂ ತಿಂದನು. 7ಕೂಡಲೆ ಅವರಿಬ್ಬರ ಕಣ್ಣುಗಳು ತೆರೆದವು. ತಾವು ಬೆತ್ತಲೆ ಆಗಿದ್ದೇವೆಂದು ತಿಳಿದು ಅವರು ಅಂಜೂರದ ಎಲೆಗಳನ್ನು ಹೊಲಿದು ಉಟ್ಟುಕೊಂಡರು.
8ಅಂದು, ಸಂಜೆಯ ತಂಗಾಳಿಯಲ್ಲಿ, ಸರ್ವೇಶ್ವರನಾದ ದೇವರು ತೋಟದೊಳಗೆ ಸಂಚರಿಸುವ ಸಪ್ಪಳವು ಕೇಳಿಸಿತು. ಅವರಿಗೆ ಕಾಣಿಸಿಕೊಳ್ಳಬಾರದೆಂದು ಆದಾಮನೂ ಹವ್ವಳೂ ಹಿಂದೆ ಅವಿತುಕೊಂಡರು. 9ಆದರೆ ಸರ್ವೇಶ್ವರನಾದ ದೇವರು, “ಎಲ್ಲಿರುತ್ತೀಯಾ?” ಎಂದು ಆದಾಮನನ್ನು ಕೂಗಿ ಕೇಳಿದರು.
10ಅದಕ್ಕೆ ಅವನು, “ತಾವು ತೋಟದಲ್ಲಿ ಸಂಚರಿಸುವ ಸಪ್ಪಳವು ಕೇಳಿಸಿತು; ಬೆತ್ತಲೆಯಾಗಿದ್ದೇನಲ್ಲಾ ಎಂದು ಹೆದರಿ ಅವಿತುಕೊಂಡೆ,” ಎಂದನು.
11“ನೀನು ಬೆತ್ತಲೆಯಾಗಿರುತ್ತಿಯೆಂದು ನಿನಗೆ ತಿಳಿಸಿದವರು ಯಾರು?” ಎಂದು ಕೇಳಿದರು.
12ಅದಕ್ಕೆ ಆದಾಮನು, “ನನ್ನ ಜೊತೆಯಲ್ಲಿ ಇರಲು ತಾವು ಕೊಟ್ಟ ಮಹಿಳೆ ಆ ಮರದ ಹಣ್ಣನ್ನು ನನಗೆ ಕೊಟ್ಟಳು; ನಾನು ತಿಂದೆ,” ಎಂದನು
13ಸರ್ವೇಶ್ವರನಾದ ದೇವರು ಆ ಮಹಿಳೆಯನ್ನು, “ಇದೇನು ನೀನು ಮಾಡಿದ್ದು?” ಎಂದು ಕೇಳಲು ಆಕೆ, “ಸರ್ಪವು ನನ್ನನ್ನು ವಂಚಿಸಿ ತಿನ್ನುವಂತೆ ಮಾಡಿತು,” ಎಂದು ಉತ್ತರಕೊಟ್ಟಳು.
ದೇವರು ಕೊಟ್ಟ ಶಾಪ
14ಆಗ. ಸರ್ವೇಶ್ವರರಾದ ದೇವರು,
ಇಂತೆಂದರು ಸರ್ಪಕ್ಕೆ:
“ಈ ಪರಿಯ ಕೃತ್ಯವನ್ನು
ನೀನೆಸಗಿದುದರಿಂದ
ಶಾಪಗ್ರಸ್ತನಾದೆ ಎಲ್ಲ ಪಶು
ಪ್ರಾಣಿಗಳಿಗಿಂತ;
ಹರಿದಾಡುವೆ ಹೊಟ್ಟೆಯ ಮೇಲೆ
ಇಂದಿನಿಂದ
ತಿನ್ನುವೆ ಮಣ್ಣನೆ ಜೀವಮಾನ
ಪರಿಯಂತ
15ಹಗೆತನವಿರಿಸುವೆನು ನಿನಗೂ ಈ
ಮಹಿಳೆಗೂ
ನಿನ್ನ ಸಂತಾನಕ್ಕೂ ಇವಳ
ಸಂತಾನಕ್ಕೂ
ಜಜ್ಜುವುದಿವಳ ಸಂತಾನ ನಿನ್ನ
ತಲೆಯನ್ನು
ಕಚ್ಚುವೆ ನೀನಾ ಸಂತಾನದ
ಹಿಮ್ಮಡಿಯನ್ನು.”
16ಬಳಿಕ ಆ ಮಹಿಳೆಗೆ:
“ಹೆಚ್ಚಿಸುವೆನು ಪ್ರಸವಕಾಲದ
ನಿನ್ನ ವೇದನೆಯನ್ನು
ಹೆರುವೆ ನೀನು ಸಂಕಷ್ಟದಿಂದಲೇ
ಮಕ್ಕಳನ್ನು.
ಆದರೂ ನಿನಗಿರುವುದು ಗಂಡನ ಬಯಕೆ
ಒಳಗಾಗುವೆ ನೀನು ಆತನ ಒಡೆತನಕ್ಕೆ."
17ಅನಂತರ ಆದಾಮನಿಗೆ:
“ತಿನ್ನಬಾರದೆಂದು ನಾ ವಿಧಿಸಿದ
ಮರದ ಹಣ್ಣನ್ನು
ತಿಂದೆ ನೀನು, ಕೇಳಿ ನಿನ್ನಾ
ಮಡದಿಯ ಮಾತನ್ನು.
ಇದಕಾರಣ ಹಾಕಿರುವೆನು ಶಾಪ
ಹೊಲನೆಲಕ್ಕೆ
ದುಡಿವೆ ನೀನು ಜೀವಮಾನವಿಡೀ
ಅದರ ಕೃಷಿಗೆ.
18ಬೆಳಸುವುದದು ಅತುಳ ಕಳೆಯನ್ನು,
ಮುಳ್ಳುಗಿಡಗಳನ್ನು
ತಿನ್ನಬೇಕಾಗುವುದು ನೀನು ಬೈಲಿನ
ಬೆಳೆಯನ್ನು.
19ನೀನುತ್ಪತ್ತಿಯಾದ ಮಣ್ಣಿಗೆ ಮರಳಿ
ಸೇರುವ ತನಕ
ಗಳಿಸಬೇಕು ಕವಳವನ್ನು
ನೆತ್ತಿಬೆವರಿಡುತ.
ಮಣ್ಣಿನಿಂದಲೇ ಬಂದವನು ನೀನು
ಮರಳಿ ಮಣ್ಣಿಗೆ ಸೇರತಕ್ಕವನು."
20ಆದಾಮನು ತನ್ನ ಹೆಂಡತಿಗೆ “ಹವ್ವ"#3:20 ‘ಹವ್ವ’ ಎಂದರೆ ಜೀವ. ಎಂದು ಹೆಸರಿಟ್ಟನು. ಏಕೆಂದರೆ ಮಾನವಕುಲಕ್ಕೆ ಮೂಲಮಾತೆ ಆಕೆ . 21ಸರ್ವೇಶ್ವರನಾದ ದೇವರು ಆದಾಮನಿಗೂ ಆತನ ಹೆಂಡತಿಗೂ ಚರ್ಮದ ಅಂಗಿಗಳನ್ನು ತೊಡಿಸಿದರು.
22ಸರ್ವೇಶ್ವರನಾದ ದೇವರು, “ಮನುಷ್ಯನು ಈಗ ನಮ್ಮಲ್ಲಿ ಒಬ್ಬರಂತೆ ಒಳಿತು - ಕೆಡುಕುಗಳ ಜ್ಞಾನವನ್ನು ಪಡೆದುಬಿಟ್ಟಿದ್ದಾನೆ. ಇನ್ನು ಅಮರ ಜೀವಿಯಾಗಲು ಜೀವವೃಕ್ಷದ ಹಣ್ಣಿಗೆ ಕೈ ಚಾಚಿಬಿಡಬಾರದು,” ಎಂದುಕೊಂಡರು. 23ಅವನು ಉತ್ಪತ್ತಿಯಾದ ಭೂಮಿಯನ್ನೇ ವ್ಯವಸಾಯ ಮಾಡಲೆಂದು ಏದೆನ್ ತೋಟದಿಂದ ಹೊರಡಿಸಿಬಿಟ್ಟರು. 24ಅದಲ್ಲದೆ, ಜೀವವೃಕ್ಷಕ್ಕೆ ಹೋಗುವ ದಾರಿಯನ್ನು ಕಾಯುವುದಕ್ಕಾಗಿ ಆ ವನದ ಪೂರ್ವದಿಕ್ಕಿನಲ್ಲೆ ‘ಕೆರೂಬಿ’ಯರನ್ನೂ ಪ್ರಜ್ವಲಿಸುತ್ತಾ ಎಲ್ಲ ಕಡೆ ಸುತ್ತುವ ಕತ್ತಿಯನ್ನೂ ಇರಿಸಿದರು.

Nke Ahọpụtara Ugbu A:

ಆದಿಕಾಂಡ 3: KANCLBSI

Mee ka ọ bụrụ isi

Kesaa

Mapịa

None

Ịchọrọ ka echekwaara gị ihe ndị gasị ị mere ka ha pụta ìhè ná ngwaọrụ gị niile? Debanye aha gị ma ọ bụ mee mbanye